ಪ್ರೇರಣೆಗಳು

 	ಜೀವಿ ಸ್ವಯಂಪ್ರೇರಿತವಾಗಿ ಕಾರ್ಯೋನ್ಮುಖವಾಗುವಂತೆ ಮಾಡುವ ಆಂತರಿಕ ಒತ್ತಡಗಳು ಅಥವಾ ಪ್ರಚೋದನೆಗಳು. ಜನ್ಮತಃ ಬರುವುದರಿಂದ ಇವನ್ನು ಜೀವಿಗಳಲ್ಲಿ ಕಾಣುತ್ತೇವೆಯೇ ವಿನಾ ನಿರ್ಜೀವಿಗಳಲ್ಲಲ್ಲ. ಪ್ರೇರಣೆ ಎಂಬ ಪದ ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ, ಈ ಒತ್ತಡಗಳನ್ನು ವಿಲಿಯಂ ಮೆಕ್ಡೊಗಲ್ ಸಹಜಪ್ರವೃತ್ತಿಗಳು ಎಂದು ಕರೆದಿದ್ದ. ಆ ಪದ ಅಸ್ಪಷ್ಟವೂ ಅನಿರ್ದಿಷ್ಟವೂ ಆದುದರಿಂದ ಈಗ ಹೆಚ್ಚು ನಿರ್ದಿಷ್ಟವಾದ ಪ್ರೇರಣೆ ಎಂಬ ಪದ ಬಳಕೆಗೆ ಬಂದಿದೆ. ಜನ್ಮತಃ ಬಂದುದಾದರೂ ಪ್ರೇರಣೆ ಕಲಿಕೆಯ ಪ್ರಭಾವಕ್ಕೆ ಒಳಗಾಗಿ ಬಹಳ ಮಟ್ಟಿಗೆ ಮಾರ್ಪಾಡಾಗುತ್ತದೆ. ಕೆಲವೊಮ್ಮೆ ಇದು ಕಲಿಕೆಯಿಂದಲೇ ಬಂದುದೇನೋ ಎನಿಸುತ್ತದೆ. ಜೀವಿ ತಾನೇ ತಾನಾಗಿ ಕಾರ್ಯೋನ್ಮುಖವಾಗುವಂತೆ ಪ್ರೇರಣೆ ಪ್ರಚೋದಿಸುತ್ತದೆಯಾದರೂ ಅದಕ್ಕೆ ಗುರಿಸಾಧನೆಯ ಮಾರ್ಗದ ಅರಿವಿರುವುದಿಲ್ಲ. ಇದೊಂದು ದಿಕ್ಕುಗಾಣದ ಗಾವಿಲ ಎನ್ನಬಹುದು. ಕಲಿಕೆಯ ಫಲವಾಗಿ ಗುರಿಯ ದಿಕ್ಕಿನ ಅರಿವು ಮೂಡಿ ಬಂದಾಗ ಪ್ರೇರಣೆ ಅಭಿಪ್ರೇರಣೆ ಎನಿಸಿಕೊಳ್ಳುತ್ತದೆ. ಆದುದರಿಂದ ಮನೋವಿಜ್ಞಾನಿಗಳು ಪ್ರೇರಣೆಯನ್ನು ಗುರಿಗಾಣದ ಆಂತರಿಕ ಪ್ರಚೋದನದ ಎಂದೂ ಅಭಿಪ್ರೇರಣೆಯನ್ನು ಗುರಿಯರಿತ ಆಂತರಿಕ ಪ್ರಚೋದನೆ ಎಂದೂ ವ್ಯಾಖ್ಯಾನ ಮಾಡುತ್ತಾರೆ. ಈ ಪ್ರೇರಣೆಗಳನ್ನು ಚೇತನಗೊಳಿಸಿ ವರ್ತನೆಯನ್ನುಂಟುಮಾಡಬಲ್ಲ ಬಾಹ್ಯಚೋದಕವನ್ನು ಅಥವಾ ಗುರಿಯನ್ನು, ಉತ್ತೇಜಕ ಅಥವಾ ಪ್ರಲೋಭನ ಎನ್ನುತ್ತಾರೆ. ಎಂದರೆ ಆಂತರಿಕ ಒತ್ತಡಕ್ಕೆ ಬಲಿಯಾಗಿ ಕಾರ್ಯೋನ್ಮುಖವಾಗಿರುವ ಜೀವಿಯನ್ನು ಈ ಉತ್ತೇಜಕ ತನ್ನೆಡೆಗೆ ಸೆಳೆದು, ತೃಪ್ತಿಯನ್ನುಂಟುಮಾಡಿ, ಸಮತೋಲನವನ್ನು ಪುನಃ ಸ್ಥಾಪಿಸುತ್ತದೆ. ಉದಾಹರಣೆ-ಹಸಿವು ಪ್ರೇರಣೆಯಾದರೆ ಆಹಾರ ಉತ್ತೇಜಕ, ನೀರಡಿಕೆ ಪ್ರೇರಣೆಯಾದರೆ ನೀರು ಉತ್ತೇಜಕ. ಹೀಗೆ ಪ್ರತಿಯೊಂದು ಪ್ರೇರಣೆಗೂ ಒಂದು ಗುರಿಯುಂಟು. ಪ್ರೇರಣೆ ಆಂತರಿಕವಾದರೆ ಉತ್ತೇಜಕ ಬಾಹ್ಯ. ಮಾನವನ ಸಮಸ್ತ ಸಾಧನೆಗಳಿಗೆ ತ್ಯಾಗಗಳಿಗೆ ಅಳಿವು ಉಳಿವುಗಳಿಗೆ ಈ ಪ್ರೇರಣೆಗಳೇ ಕಾರಣವೆನ್ನಬಹುದು.

	ಮಾನವನ ಮಾನಸಿಕ ಸಮಾಯೋಜನೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವನ ಪ್ರೇರಣೆಗಳಾವುವು ಮತ್ತು ಅವುಗಳ ಪೂರೈಕೆಗೆ ಪೋಷಕವಾದ ಅಥವಾ ಪ್ರತಿರೋಧಕವಾದ ಅಂಶಗಳಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ವ್ಯಕ್ತಿ ಸಮಾಯೋಜಿತನೆ ಅಥವಾ ಅಪಸಮಾಯೋಜಿತನೆ ಎಂಬುದನ್ನು 1. ಪ್ರೇರಣೆ. ಅಭಿಪ್ರೇರಣೆ ಮತ್ತು ಆದರ್ಶಗಳ ನಡುವಣ ಸಾಮರಸ್ಯ. 2. ಬಯಕೆಗಳು ಮತ್ತು ಅಭೀಷ್ಟಗಳು ಎಷ್ಟು ತೃಪ್ತಿಕರ ಸಾಧನಗಳಾಗಿವೆ ಎಂಬ ಅಂಶ. ಮತ್ತು 3. ವ್ಯಕ್ತಿಯ ಬಯಕೆಗಳು ಹಾಗೂ ಕಾರ್ಯಗಳು ಸಮಾಜದ ಮಾನಕಗಳಿಗೆ ಕಟ್ಟುಪಾಡುಗಳಿಗೆ ಎಷ್ಟರ ಮಟ್ಟಿಗೆ ಬದ್ಧವಾಗಿವೆ ಎಂಬ ಅಂಶಗಳು ನಿರ್ಧರಿಸುತ್ತವೆ. ಹೀಗೆ ಆಂತರಿಕ ಒತ್ತಡಗಳು, ವ್ಯಕ್ತಿಯ ಶಾರೀರಕ ಮತ್ತು ಮಾನಸಿಕ ಸಮತೋಲನವನ್ನು ಸಾಮಾಜಿಕ ಸಮಾಯೋಜನೆಯನ್ನು ಮಾನಸಿಕ ಶಾಂತಿಯನ್ನು ಸಾಧನೆಗಳನ್ನು ಬಹಳಮಟ್ಟಿಗೆ ನಿರ್ಧರಿಸುತ್ತವೆ.

	ಪ್ರೇರಣೆಗಳು ಮತ್ತು ಸಮತೋಲನ : ಜೀವಿ ಬದುಕಿ ಬಾಳಲು ತನ್ನ ಶಾರೀರಕ ಸ್ಥಿತಿಯನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಕಾಪಾಡಿಕೊಂಡು ಹೋಗಬೇಕು. ಎಂದರೆ ಶರೀರಕ್ಕೆ ಅಗತ್ಯವಾದ ಉಷ್ಣಾಂಶ ನೀರು ಲವಣ ಪೌಷ್ಟಿಕಾಂಶಗಳು ವಿಶ್ರಾಂತಿ ನಿದ್ದೆ ಇತ್ಯಾದಿಗಳು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಇಲ್ಲಿರುವಂತೆ ನೋಡಿಕೊಳ್ಳಬೇಕು. ಈ ಅಗತ್ಯ ಪ್ರಮಾಣದಲ್ಲಿ ಏನಾದರೂ ವೈಪರೀತ್ಯ ಉಂಟಾದರೆ ಶರೀರದಲ್ಲಿ ಅಸಮತೋಲನ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿ ಅಹಿತಕರವಾದುದಾಗಿ ವ್ಯಗ್ರತೆಯನ್ನುಂಟುಮಾಡುವುದರಿಂದ ಅವನ್ನು ತೊಡೆದುಹಾಕಿ, ಸಮತೋಲನವನ್ನು ಮರುಸ್ಥಾಪಿಸಲು ಜೀವಿ ಕಾರ್ಯೋನ್ಮುಖವಾಗುತ್ತದೆ. ಇಷ್ಟೇ ಅಲ್ಲದೆ ಅಪಾಯ ಒದಗಿಬಂದಾಗ ಅದರಿಂದ ಪಾರಾಗುವಂತೆ ಮಾಡುವುದು ತನ್ನ ಸಂತತಿಯನ್ನು ಉಳಿಸಿಕೊಳ್ಳಲು ಮತ್ತು ಲೈಂಗಿಕ ತೃಪ್ತಿಯನ್ನು ಪಡೆಯಲು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುವುದು, ತನ್ನ ಹಸುಳೆಗಳನ್ನು ರಕ್ಷಿಸಲು, ಲಾಲನೆ ಪಾಲನೆ ಮಾಡಲು ತಾಯ್ತನವನ್ನು ತೋರುವುದು ಇತ್ಯಾದಿಗಳೆಲ್ಲವೂ ಪ್ರೇರಣೆಗಳೆ. ಇವೆಲ್ಲವುಗಳ ಗುರಿ ಸಮತೋಲನವನ್ನು ಕಾಪಾಡಿಕೊಳ್ಳುವುದೇ ಆಗಿರುತ್ತದೆ. ಶರೀರದ ಉಷ್ಣಾಂಶ ತಗ್ಗಿದಾಗ ಬೆಚ್ಚನೆಯ ಉಡುಪುಗಳನ್ನು ಹಾಕಿಕೊಳ್ಳುತ್ತೇವೆ. ಹೀಗೆ ಸಮತೋಲನಕಾರ್ಯ ಇಚ್ಛಾಪೂರ್ವಕವಾಗಿಯೊ ನಿರಿಚ್ಛಾಪೂರ್ವಕವಾಗಿಯೊ ನಡೆಯುತ್ತಲೇ ಇರುತ್ತದೆ. ಈ ಕಾರ್ಯ ಚಟುವಟಿಕೆಗಳು ಕೆಲವೊಮ್ಮೆ ಶಾರೀರಕವಾಗಿರುತ್ತವೆ. ಕೆಲವೊಮ್ಮೆ ಮಾನಸಿಕವಾಗಿರುತ್ತವೆ. ಒಟ್ಟಿನಲ್ಲಿ ಈ ಎಲ್ಲ ಕಾರ್ಯಗಳ ಮೂಲ ಉದ್ದೇಶ ಸಮತೋಲನವನ್ನು ಕಾಪಾಡಿಕೊಂಡು ಹೋಗುವುದೇ ಆಗಿರುತ್ತದೆ.

	ಜೀವಿಯ ಕಾರ್ಯಚಟುವಟಿಕೆಯ ಹಿಂದೆ ಶರೀರದಲ್ಲಿ ಯಾವ ಸ್ಥಿತಿ ಕಾಣಿಸಿಕೊಳ್ಳುತ್ತದೆ? ಚಟುವಟಿಕೆ ಯಾವ ಕೊರತೆಯಿಂದ ಉಂಟಾಗುತ್ತದೆ? ಮತ್ತು ಚಟುವಟಿಕೆ ಯಾವ ಕಾರ್ಯದಿಂದ ಮುಕ್ತಾಯವಾಗುತ್ತದೆ? ಈ ಆಧಾರಗಳ ಮೇಲೆ ಪ್ರೇರಣೆಗಳನ್ನು ವರ್ಗೀಕರಿಸಲಾಗಿದೆ. ಉದಾಹರಣೆ: ಹಸಿವು. ಚಟುವಟಿಕೆಯ ಹಿನ್ನೆಲೆಯಲ್ಲಿ ಶರೀರದ ಅಸಮತೋಲನ ಕಾಣಿಸಿಕೊಳ್ಳುತ್ತದೆ. ಈ ಅಸಮತೋಲನ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುತ್ತದೆ. ಚಟುವಟಿಕೆ ಎನ್ನುವುದರಲ್ಲಿ ಮುಕ್ತಾಯವಾಗುತ್ತದೆ. ಹೀಗೆಯೇ ನೀರಡಿಕೆ, ಮೈಥುನ ತಾಯ್ತನ ಇತ್ಯಾದಿಗಳೂ.

	ಪ್ರೇರಣೆಗಳಲ್ಲಿ ಎರಡು ವಿಧ. 1. ಜೀವಿಗಳ ದೇಹದಲ್ಲಿಯೇ ಜನಿಸಿ ಅವುಗಳ ಅಗತ್ಯಗಳನ್ನು ಮತ್ತು ಆಸೆ ಆಕಾಂಕ್ಷೆಗಳನ್ನು ಸೂಚಿಸುವ ಪ್ರೇರಣೆಗಳಿಗೆ ದೈಹಿಕ ಪ್ರೇರಣೆಗಳು (ಪ್ರಕೃತಿಜನ್ಯ ಪ್ರೇರಣೆಗಳು, ಮೂಲಭೂತ ಪ್ರೇರಣೆಗಳು) ಎಂದು ಕರೆಯುತ್ತಾರೆ. ಜೀವಿಯ ಅಳಿವು ಉಳಿವಿಗೆ ಇವೇ ಮೂಲವಾದುದರಿಂದ, ಇವನ್ನು ಮೂಲಪ್ರೇರಣೆಗಳೆನ್ನುತ್ತಾರೆ. ಇವು ಸ್ವಾಭಾವಿಕವೂ ಸರ್ವಸಾಮಾನ್ಯವೂ ಆದುವು. ಉದಾಹರಣೆ: ಹಸಿವು, ನೀರಡಿಕೆ, ಮಾತೃತ್ವ, ಲೈಂಗಿಕತೆ ಇತ್ಯಾದಿ. 2. ಸಮಾಜಜನ್ಯ ಪ್ರೇರಣೆಗಳು ಅಥವಾ ಆರ್ಜಿತ ಪ್ರೇರಣೆಗಳು (ಗೌಣಪ್ರೇರಣೆಗಳು, ಕಲಿಕೆಯಿಂದ ಬಂದ ಪ್ರೇರಣೆಗಳು) ಇವುಗಳಿಂದ ಮಾನವನ ಅಳಿವು ಉಳಿವಿಗೆ ಯಾವ ಭಾದಕವೂ ಇಲ್ಲ. ಇವುಗಳಿಲ್ಲದೆಯೆ ಮಾನವ ಬದುಕಬಲ್ಲ. ಉದಾಹರಣೆ: ಸಾಂಘಿಕಪ್ರೇರಣೆ, ಮಾನ್ಯತಾ ಪ್ರೇರಣೆ. ಭದ್ರತಾ ಪ್ರೇರಣೆ, ಆತ್ಮ ಪ್ರತಿಷ್ಟಾಪನಾ ಪ್ರೇರಣೆ ಸ್ಪರ್ಧೆ ಸಹಕಾರ ನಿಂದೆ ಪ್ರಶಂಸೆ ಇತ್ಯಾದಿಗಳು.

	ದೈಹಿಕ ಪ್ರೇರಣೆಗಳಲ್ಲಿ ಮೊದಲು ಬರುವುದು ಹಸಿವು. ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೋ ಮಾನವನ ಬಹುಪಾಲು ಚಟುವಟಿಕೆಗಳು ಆತನ ಆಹಾರದ ಅಗತ್ಯಗಳಿಗೆ ಸಂಬಂಧಪಟ್ಟಿರುತ್ತವೆ. ಉದಾಹರಣೆ: ಕೃಷಿ, ಮೀನುಗಾರಿಕೆ, ಬೇಟೆಯಾಡುವುದು. ಉದ್ಯೋಗ ಇತ್ಯಾದಿ. ಈ ಎಲ್ಲ ಚಟುವಟಿಕೆಗಳ ಮೂಲ ಉದ್ದೇಶ ಹಸಿವನ್ನು ಪೂರೈಸುವುದು. ಶರೀರದಲ್ಲಿ ಆಹಾರದ ಯಾವುದೇ ಅಂಶದ ಕೊರತೆಯುಂಟಾದರೂ ಹಸಿವೆಯ ಶೂಲೆ ಕಾಣಿಸಿಕೊಳ್ಳುತ್ತದೆ. ಈ ಶೂಲೆಗೂ ಜಠರ ಸಂಕುಚಿತಗೊಳ್ಳುವುದಕ್ಕೂ ಪರಸ್ಪರ ಸಂಬಂಧವಿದೆ ಎಂಬ ಭಾವನೆಯಿತ್ತು. ಇಂದು ಅದು ತಿರಸ್ಕøತವಾಗಿ ಹಸಿವಿನ ಶೂಲೆ ಮತ್ತು ಜಠರ ಕುಗ್ಗುವಿಕೆಗಳೆರಡೂ ಜೀವ ರಾಸಾಯನಿಕ ವಸ್ತುವಿನ ಕೊರೆಯಿಂದ ಉಂಟಾಗುತ್ತವೆ ಎಂದು ತಿಳಿದು ಬಂದಿದೆ. ಜೀವಿಗೆ ಯಾವುದರ ಕೊರೆಯುಂಟಾಗುತ್ತದೊ ಅದನ್ನು ತಿನ್ನುವುದರಿಂದ ತೃಪ್ತಿಯುಂಟಾಗುತ್ತದೆ. ಅದಲ್ಲದೆ ಬೇರೇನನ್ನು ತಿಂದರೂ ತೃಪ್ತಿಯುಂಟಾಗುವುದಿಲ್ಲ. ತಿಂಡಿ ಅಂಗಡಿಗಳ ಅಧ್ಯಯನದಿಂದ ಈ ಸತ್ಯ ಹೊರಬಿದ್ದಿದೆ.

	ಪ್ರಾಣಿಗಳಲ್ಲಿ ಹಸಿವು ಕೇವಲ ಆಹಾರಾಂಶದ ಕೊರತೆಯಿಂದಲೇ ಉಂಟಾಗುತ್ತದೆ ಎಂಬುದು ಸತ್ಯವಾದರೂ ಮಾನವನಲ್ಲಿ ಆಹಾರಾಂಶದ ಕೊರತೆಗಿಂತ ಇತರ ಅಂಶಗಳು ಬಹಳ ಮಟ್ಟಿಗೆ ಪ್ರಭಾವ ಬೀರುತ್ತವೆ. ಎಂದರೆ ಆಹಾರದ ರುಚಿ, ವಾಸನೆ, ನೋಟ, ವಯಸ್ಸು, ಅಭ್ಯಾಸ, ಪದ್ಧತಿ, ಕಟ್ಟುಕಟ್ಟಲೆಗಳು, ಸಾಂಸ್ಕøತಿಕ ಮೌಲ್ಯ ಇತ್ಯಾದಿ. ಇವು ಸಹ ಹಸಿವನ್ನುಂಟುಮಾಡುತ್ತವೆ. ಹಸಿವು ಬಹಳ ಪ್ರಬಲ ಪ್ರೇರಣೆಯಾದುದರಿಂದ ಅದರ ತೃಪ್ತಿಗೆ ಯಾವುದೇ ಅಡ್ಡಿಯುಂಟಾದರೆ, ವ್ಯಕ್ತಿಯ ವರ್ತನೆ ಹತೋಟಿತಪ್ಪಿ, ಸಾಮಾಜಿಕ ಸಾಂಸ್ಕøತಿಕ ಮತ್ತು ಧಾರ್ಮಿಕ ಮೌಲ್ಯಗಳು ಮೂಲೆಪಾಲಾಗುತ್ತವೆ. ಎಂಥ ನಿಷ್ಠಾವಂತನಾದರೂ ಶಿಸ್ತಿನ ಸಿಪಾಯಿಯಾದರೂ ಹಸಿವೆಗೆ ತಲೆಬಾಗಲೇಬೇಕು. ಸೇನೆ ಮುಂದುವರಿಯುವುದು ಅದರ ಹೊಟ್ಟೆಯನ್ನವಲಂಬಿಸಿ ಎಂಬ ಮಾತು ಸುಳ್ಳಲ್ಲ. ಅನೇಕ ಸಂದರ್ಭಗಳಲ್ಲಿ ದೇಶದಲ್ಲಾಗುವ ಆಂದೋಳನ, ಆತ್ಮಹತ್ಯೆ ಅನಾಚಾರಗಳು ಅನೈತಿಕ ವ್ಯವಹಾರಗಳು ಹಸಿವೆಯಿಂದ ಉಂಟಾಗುತ್ತವೆ ಎನ್ನಬಹುದು.

	ಹಸಿವೆಗಿಂತಲೂ ಪ್ರಬಲವಾದುದು ನೀರಡಿಕೆ ಪ್ರೇರಣೆ. ಆದುದರಿಂದಲೇ ಒಬ್ಬ ವ್ಯಕ್ತಿ ಹಸಿವನ್ನು ಕೆಲವು ದಿನಗಳವರೆಗಾದರೂ ಸಹಿಸಿಕೊಳ್ಳಬಲ್ಲ. ಆದರೆ ನೀರಡಿಕೆಯನ್ನು ಕೆಲವು ಗಂಟೆಗಳವರೆಗೂ ಸಹಿಸಲಾರ. ಜೀವಿಯ ಶರೀರದಲ್ಲಿ ಬೆವರುವುದು, ಮಲಮೂತ್ರಗಳ ವಿಸರ್ಜನೆ, ಉಸಿರಾಟ ಇತ್ಯಾದಿಗಳು ಸದಾ ನಡೆಯುತ್ತಿರುವುದರಿಂದ, ಜೀವಕೋಶಗಳಲ್ಲಿ ನಿರ್ಜಲ ಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿಯ ಫಲವೇ ನೀರಡಿಕೆ. ಇದು ಶಾರೀರಕ ಸಮತೋಲನವನ್ನು ನಾಶಪಡಿಸಿ ಜೀವಿಯನ್ನು ಕಾರ್ಯೋನ್ಮುಖವಾಗಿ ಮಾಡುತ್ತದೆ. ನೀರನ್ನು ಕುಡಿದಾಗಲೇ ಈ ಪ್ರೇರಣೆಯ ತೃಪ್ತಿಯಾಗುವುದು. ಇಲ್ಲಿಯೂ ಶಾರೀರಕ ಅಂಶಗಳೇ ಅಲ್ಲದೆ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು, ಅಭ್ಯಾಸ ನೋಟ ಇತ್ಯಾದಿಗಳೂ ಪ್ರಭಾವ ಬೀರುತ್ತವೆ. ಜಲಕ್ಷಾಮವಿರುವ ಸ್ಥಳಗಳಲ್ಲಿ ಅಥವಾ ಕಾಲದಲ್ಲಿ ಈ ಪ್ರೇರಣೆ ಬಹಳ ಪ್ರಬಲವಾಗಿರುತ್ತದೆ. 

	ದಾಂಪತ್ಯ ಜೀವನ ಹಾಗೂ ವಂಶರಕ್ಷಣೆಯ ಮೂಲ ಲೈಂಗಿಕ ಪ್ರೇರಣೆ. ಈ ಪ್ರೇರಣೆಯ ಆಂಗಿಕ ಆಧಾರ ಪ್ರಜನನಗ್ರಂಥಿಗಳ ಅಥವಾ ಲಿಂಗಗ್ರಂಥಿಗಳು. ಇವು ಸ್ತ್ರೀ ಪುರುಷರಿಬ್ಬರಲ್ಲೂ ಆಂಡ್ರೋಜನ್ ಮತ್ತು ಎಸ್ಟ್ರೋಜನ್ ಎಂಬ ಅಂತಸ್ರಾವಗಳನ್ನು ಉತ್ಪತ್ತಿಮಾಡುತ್ತವೆ. ಆದರೆ ಪುರುಷರಲ್ಲಿ ಆಂಡ್ರೋಜನ್ ಹೆಚ್ಚಾಗಿಯೂ ಸ್ತ್ರೀಯಲ್ಲಿ ಎಸ್ಟ್ರೋಜನ್ ಹೆಚ್ಚಾಗಿಯೂ ಉತ್ಪತ್ತಿಯಾಗುವುದರಿಂದ ಪುರುಷ ಪುರುಷನಂತೆಯೂ ಸ್ತ್ರೀ ಸ್ತ್ರೀಯಂತೆಯೂ ಕಾಣುವುದೇ ಅಲ್ಲದೆ ಆಯಾದೇಹ ಯುಕ್ತವಾದ ರೀತಿಯಲ್ಲಿ ವರ್ತಿಸುತ್ತದೆ. ಅಂತಯೇ ಅವರ ಅಭಿರುಚಿಗಳೂ ಲೈಂಗಿಕ ಮತ್ತು ಉಪಲೈಂಗಿಕ ಲಕ್ಷಣಗಳೂ ರೂಪಗೊಳ್ಳುತ್ತವೆ. ಪ್ರೌಢಾವಧಿಯಲ್ಲಿ ಕಾರ್ಯಾರಂಭಿಸಿದ ಈ ಗ್ರಂಥಿಗಳು ಸ್ತ್ರೀಯಲ್ಲಿ ರಜೋನಿವೃತ್ತಿಯವರೆಗೂ ಪುರುಷನಲ್ಲಿ ಸಂತಾನ ನಿವೃತ್ತಿಯವರೆಗೂ ತಮ್ಮ ಕಾರ್ಯಗಳನ್ನು ಮುಂದುವರಿಸುತ್ತವೆ. ನಡುವಯಸ್ಸಿನಿಂದ ಮುಂದೆಯೂ ಇವುಗಳ ಕಾರ್ಯ ಮುಂದುವರಿದರೂ ಆಂಡ್ರೋಜನ್ ಮತ್ತು ಎಸ್ಟ್ರೋಜನ್‍ಗಳ ಉತ್ಪತ್ತಿ ಪ್ರಮಾಣದಲ್ಲಿ ಸ್ತ್ರೀಪುರುಷರಿಬ್ಬರಲ್ಲೂ ತದ್‍ವಿರುದ್ಧ ಸ್ಥಿತಿಕಂಡುಬರುತ್ತದೆ. ಆದುದರಿಂದಲೆ ನಾಡುವಯಸ್ಸಿನ ಸ್ತ್ರೀಯರಲ್ಲಿ ಪುರುಷಲಕ್ಷಣಗಳೂ ಮತ್ತು ಪುರುಷನಲ್ಲಿ ಸ್ತ್ರೀ ಲಕ್ಷಣಗಳೂ ಕಾಣಿಸಿಕೊಳ್ಳಲಾರಂಭಿಸುವೆ. ಈ ಮಾರ್ಪಾಡನ್ನೇ ಸ್ತ್ರೀಯ ಪುರುಷೀಕರಣ ಮತ್ತು ಪುರುಷನ ಸ್ತ್ರೀಕರಣ ಎನ್ನುತ್ತಾರೆ. 

	ಪ್ರಾಣಿಗಳ ಲೈಂಗಿಕ ಜೀವನ ಸಂಪೂರ್ಣವಾಗಿ ಈ ಗ್ರಂಥಿಗಳನ್ನು ಅವಲಂಬಿಸಿರುತ್ತದೆ. ಆದುದರಿಂದ ಈ ಗ್ರಂಥಿಕ್ರಿಯೆಯಲ್ಲಿ ವೈಪರೀತ್ಯವುಂಟಾದರೆ, ಲೈಂಗಿಕ ಜೀವನದಲ್ಲೂ ಮಾರ್ಪಾಡುಗಳು ಕಾಣಿಸಿಕೊಳ್ಳುತ್ತವೆ. ಆದರೆ ಮಾನವನ ಲೈಂಗಿಕ ಪ್ರೇರಣೆಗೆ ಮೂಲ ಲಿಂಗಗ್ರಂಥಿಗಳೇ ಆದರೂ ಸಾಂಸ್ಕøತಿಕ, ಸಾಮಾಜಿಕ, ನೈತಿಕ ಮೌಲ್ಯಗಳು ಮತ್ತು ಅಭ್ಯಾಸಗಳು ಪ್ರಧಾನ ಪಾತ್ರವಹಿಸುತ್ತವೆ. ಆದುದರಿಂದಲೆ ರಜೋನಿವೃತ್ತಿಯೂ ಅನಂತರವೂ ಲೈಂಗಿಕ ಚಟುವಟಿಕೆ ಹಾಗೆಯೇ ಕೆಲವು ಕಾಲ ಮುಂದುವರಿಯುತ್ತದೆ. ಲೈಂಗಿಕ ಚಟುವಟಿಕೆಗಳಲ್ಲಿ ಮತ್ತು ತೃಪ್ತಿಪಡೆಯುವ ವಿಧಾನಗಳಲ್ಲಿ ಸಾಂಸ್ಕøತಿಕ ಭೇದಗಳನ್ನು ಸಾಮಾಜಿಕ ಭೇದಗಳನ್ನು ವ್ಯಕ್ತಿಭೇದಗಳನ್ನು ಕಾಣಬಹುದು.

	ಲೈಂಗಿಕ ಪ್ರೇರಣೆಯಲ್ಲಿ ವೈಪರೀತ್ಯಗಳೂ ಕಾಣಿಸಿಕೊಂಡರೆ, ಅತಿಕಾಮುಕತೆ, ಮೃಗಕಾಮುಕತೆ, ಅತ್ಯಾಚಾರ ಬಾಲ ಅತ್ಯಾಚಾರ, ಸಲಿಂಗರತಿ, ಮುಷ್ಟಿಮೈಥುನ, ಲೈಂಗಿಕ ಜಡತೆ, ಷಂಡತನ, ನಪುಂಸಕತ್ವ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಈ ಪ್ರೇರಣೆಯ ತೃಪ್ತಿಗೆ ಯಾವುದೇ ವಿಧವಾದ ತಡೆಯುಂಟಾದರೆ ಹತಾಶೆಯುಂಟಾಗಿ ಮನೋರೋಗಗಳು ಕಾಣಿಸಿಕೊಳ್ಳುತ್ತವೆ. ಎಂಬುದು ಸಿಗ್ಮಂಡ್ ಪ್ರಾಯ್ಡ್‍ನ ಸಿದ್ಧಾಂತ. ಅಂತಯೇ ಕಲೆ ಸಾಹಿತ್ಯ ಮತ್ತಿತರ ಸಾಧನೆಗಳು ಲೈಂಗಿಕ ಪ್ರೇರಣೆಯು ಉದಾತ್ತೀಕರಣ ರೂಪಗಳು ಎಂಬುದು ಆತನ ಅಭಿಪ್ರಾಯ. ವ್ಯಕ್ತಿ ತನ್ನ ಲೈಂಗಿಕ ಪ್ರೇರಣೆಯನ್ನು ಪಳಗಿಸಬಲ್ಲನಾದರೆ ಅದ್ಭುತ ಸಾಧನೆಗಳನ್ನು ಮಾಡಬಹುದು. ಉದಾಹರಣೆ: ಗಾಂಧಿ ರಾಮಕೃಷ್ಣ ಶಂಕರ ಬುದ್ಧ ಮಹಾವೀರ ಷೆಲಿ ಇವರ ಸಾಧನೆಗಳೇ ಸಾಕ್ಷಿ. ಇದಕ್ಕೆ ವಿರುದ್ಧವಾಗಿ ಲೈಂಗಿಕ ಪ್ರೇರಣೆಗೆ ಮಣಿದು ದಾಸನಾದರೆ ಅದು ವಿಕೃತ ರೂಪವನ್ನು ತಾಳಿ ವಡಬಾಗ್ನಿಯಂತೆ ಪ್ರಪಂಚವನ್ನೇ ಆಪೋಶನ ತೆಗೆದುಕೊಳ್ಳಲೂಬಹುದು. ರಾಮಾಯಣ, ಟ್ರೋಜನ್‍ಯುದ್ಧ ಇತ್ಯಾದಿಗಳೇ ಇದಕ್ಕೆ ಸಾಕ್ಷಿ. ವಿಕೃತಕಾಮಿಯಾಗಿದ್ದ ಹಿಟ್ಲರ್ ತನ್ನ ಲೈಂಗಿಕ ದೌರ್ಬಲ್ಯವನ್ನು ಬಲಾತ್ಕಾರವಾಗಿ ಗೆಲ್ಲುವುದಕ್ಕಾಗಿ ಲಕ್ಷಗಟ್ಟಲೆ ಜನರ ಕೊಲೆಗೆ ಕಾರಣನಾದ, ರಕ್ತದ ಹೊಳೆ ಹರಿಸಿದ. ಧರ್ಮಕ್ಕೂ ಕಾಮಕ್ಕೂ ಹತ್ತಿರದ ನಂಟು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು, ಆದುದರಿಂದಲೆ ಧಾರ್ಮಿಕ ಕ್ರಾಂತಿಯಲ್ಲಿ ಕಾಮ ಮುಖ್ಯಪಾತ್ರವಹಿಸುತ್ತದೆ. ಮೇಲಿನ ಮಾಹಾಪುರುಷರೇ ಇದಕ್ಕೆ ಸಾಕ್ಷಿಗಳು. 

	ಸಂತಾನರಕ್ಷಣೆಗೆ ಅಥವಾ ವಂಶಪರಂಪರೆಗೆ ಲೈಂಗಿಕ ಪ್ರೇರಣೆ ಎಷ್ಟು ಮುಖ್ಯವೊ ತಾಯ್ತನದ ಪ್ರೇರಣೆಯೂ ಅಷ್ಟೇ ಮುಖ್ಯ, ತಾಯ್ತನದ ಪ್ರೇರಣೆಯನ್ನು ಸಕಲ ಜೀವರಾಶಿಗಳಲ್ಲೂ ಕಾಣಬಹುದು. ಇದರ ಆಂಗಿಕ ಆಧಾರ ಪಿಟ್ಯೂಟರಿ ಗ್ರಂಥಿಯ ಪ್ರೊಲಾಕ್ಟಿನ್ ಎಂಬ ಅಂತಸ್ರಾವ ಎಂದು ತಿಳಿದು ಬರುತ್ತದೆ. ಈ ಸ್ರಾವ ಹೆಣ್ಣು ಪ್ರಾಣಿಗಳಲ್ಲಿ ಉತ್ಪತ್ತಿಯಾಗುವುದರಿಂದ ತಾಯ್ತನವನ್ನು ಅವುಗಳಲ್ಲಿ ಕಾಣುತ್ತೇವೆ. ತಾಯ್ತನದ ಪ್ರೇರಣೆ ಪ್ರಾಣಿಗಳಲ್ಲಿ ಎಷ್ಟು ಪ್ರಬಲವಾಗಿರುತ್ತದೆ ಎಂದರೆ, ಅವು ತಮ್ಮ ಮರಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಬಿಡಲು ಸಿದ್ಧವಾಗಿರುತ್ತವೆ. ತಾಯ್ತನದ ಪ್ರೇರಣೆಗೆ ಈ ಸ್ರಾವವೇ ಕಾರಣವೆನ್ನುವುದಕ್ಕೆ ಸಾಕ್ಷಿಯಾಗಿ, ಗಂಡು ಇಲಿಗಳಿಗೆ ಈ ಸ್ರಾವವನ್ನು ಚುಚ್ಚಿದಾಗ ಅವು ತಾಯ್ತನದ ವರ್ತನೆಯನ್ನು ತೋರಿಸಿದವು ಎಂದು ತಿಳಿದುಬರುತ್ತದೆ. ತಾಯ್ತನದ ಪ್ರೇರಣೆ ಸಕಲ ಪ್ರಾಣಿಗಳಲ್ಲೂ ಕಂಡುಬಂದರೂ, ಅವುಗಳ ಅಭಿವ್ಯಕ್ತಿರೂಪ ಮಾತ್ರ ಒಂದು ಪ್ರಾಣಿವರ್ಗದಿಂದ ಮತ್ತೊಂದು ಪ್ರಾಣಿವರ್ಗಕ್ಕೆ ಭಿನ್ನವಾಗಿರುತ್ತದೆ. ಆದರೆ ಒಂದೇ ವರ್ಗದ ಎಲ್ಲ ಪ್ರಾಣಿಗಳಲ್ಲೂ ತಾಯ್ತನದ ವರ್ತನೆ ಒಂದೇ ರೀತಿಯಾಗಿರುತ್ತದೆ. ಎಂದರೆ ಮರಿಗಳನ್ನು, ಸಾಕುವ ಸಲಹುವ ಮತ್ತು ರಕ್ಷಿಸುವ ವರ್ತನೆಗಳು ಒಂದೇ ವಿಧವಾಗಿರುತ್ತವೆ. ವಿಕಾಸದ ಹಂತವೇರಿದಂತೆಲ್ಲ ಮರಿಗಳ ರಕ್ಷಣೆ ಮತ್ತು ಪಾಲನೆಯ ಅವಧಿ ಅಧಿಕವಾಗುತ್ತ ಬರುತ್ತದೆ.

	ಸ್ತ್ರೀಯ ತಾಯ್ತನದ ಪ್ರೇರಣೆಗೆ ಪ್ರೊಲಾಕ್ಟಿನ್ ಎಂಬ ಸ್ರಾವವೇ ಕಾರಣವಾದರೂ ಸಾಂಸ್ಕøತಿಕ ಮತ್ತು ಸಾಮಾಜಿಕ ಅಂಶಗಳು ಹೆಚ್ಚು ಪ್ರಭಾವ ಬೀರುತ್ತವೆ. ಆದುದರಿಂದ ತಾಯ್ತನದ ವರ್ತನೆಯಲ್ಲಿ, ಸಾಮಾಜಿಕ ಮತ್ತು ಸಾಂಸ್ಕøತಿಕ ಭೇದಗಳನ್ನು ಕಾಣಬಹುದು. ಇತ್ತೀಚೆಗಂತೂ ನಾಗರಿಕತೆಯ ಫಲವಾಗಿ, ಮಕ್ಕಳನ್ನು ಪಡೆಯಬೇಕು, ಅವರನ್ನು ಪಾಲಿಸಬೇಕು ಎಂಬ ತಾಯ್ತನದ ಬಯಕೆ ಬಹಳಮಟ್ಟಿಗೆ ಕ್ಷೀಣಿಸುತ್ತ ಬಂದಿದೆ, ಎಂಬುದು ಕೆಲವು ಅಧ್ಯಯನಗಳಿಂದ ವೇದ್ಯವಾಗುತ್ತದೆ. ಮಕ್ಕಳ ಪಾಲನೆ ಪೋಷಣೆ ಮತ್ತು ರಕ್ಷಣೆಗಳಲ್ಲಿ ಕಂಡುಬರುವ ಸಾಂಸ್ಕøತಿಕ ಬೇಧಗಳನ್ನು ವ್ಯಕ್ತಿವೈವಿಧ್ಯಗಳನ್ನು ಗಮನಿಸಿದರೆ ಈ ಪ್ರೇರಣೆ ಜನ್ಮದತ್ತವಾಗಿ ಬಂದುದಲ್ಲ, ಕಲಿಕೆಯಿಂದ ಬಂದುದು ಎಂದೆನಿಸುತ್ತದೆ.

	ಮೇಲೆ ವಿವರಿಸಿದ ಶಾರೀರಿಕ ಪ್ರೇರಣೆಗಳೇ ಅಲ್ಲದೆ, ಇನ್ನೂ ಇತರ ಪ್ರೇರಣೆಗಳು-ವಿಸರ್ಜನೆ, ವಿಶ್ರಾಂತಿ, ನಿದ್ರೆ, ಇತ್ಯಾದಿಗಳೂ ವ್ಯಕ್ತಿ ಕಾರ್ಯೋನ್ಮುಖವಾಗುವಂತೆ ಪ್ರಚೋದಿಸುವುದೇ ಅಲ್ಲದೆ ಸಮತೆ ಸಮತೋಲನಗಳಿಗೆ, ಸಾಮಾನ್ಯ ಅಸಾಮಾನ್ಯ ವರ್ತನೆಗಳಿಗೆ, ಸಾಧನೆಗಳಿಗೆ ಕಾರಣವಾಗುತ್ತವೆ. 

	ಪ್ರೇರಣೆಗಳಲ್ಲಿ ಯಾವುದು ಹೆಚ್ಚು ಪ್ರಬಲವಾದುದು ಮತ್ತು ಯಾವುದು ದುರ್ಬಲವಾದುದು ಎಂಬುದನ್ನು ನಿರ್ಧರಿಸಲು ಮನೋವಿಜ್ಞಾನಿಗಳು ಕೆಲವು ವಿಧಾನಗಳನ್ನೂ ಬಳಸಿಕೊಂಡಿದ್ದಾರೆ. 1. ಒಂದು ಪ್ರೇರಣೆಯನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟುವುದು. 2. ವರ್ತನ ಪಂಜರ ವಿಧಾನ, ಮತ್ತು 3. ಅಡಚಣೆಪೆಟ್ಟಿಗೆ ವಿಧಾನ, ಈ ವಿಧಾನಗಳನ್ನು ಬಳಸಿಕೊಂಡು ನಡೆಸಿದ ಅಧ್ಯಯನಗಳ ಪ್ರಕಾರ ಪ್ರೇರಣೆಗಳ ಬಲಾಬಲಗಳ ಅನುಕ್ರಮ ಈ ಮುಂದೆ ಕಾಣುವಂತಿದೆ: 1. ತಾಯ್ತನದ ಪ್ರೇರಣೆ 2. ನೀರಡಿಕೆ 3. ಹಸಿವು 4. ಲೈಂಗಿಕ ಪ್ರೇರಣೆ ಮತ್ತು 5. ಅನ್ವೇಷಣೆ ಇತ್ಯಾದಿ. ಹೀಗೆಯೇ ಸಾಮಾಜಿಕ ಪ್ರೇರಣೆಗಳನ್ನೂ ಯುಕ್ತವಾದ ವಿಧಾನಗಳಿಂದ ಅಳೆದು ನಿರ್ಧರಿಸಿದ್ದಾರೆ.

	ಹಿಂದೆಯೇ ವಿವರಿಸಿರುವಂತೆ ವ್ಯಕ್ತಿ ತನ್ನ ಶಾರೀರಕ ಅಗತ್ಯಗಳನ್ನು ಸಮಾಜ ಮತ್ತು ಸಂಸ್ಕøತಿಗಳ ಚೌಕಟ್ಟಿನಲ್ಲಿ ತೃಪ್ತಿ ಪಡಿಸಿಕೊಳ್ಳಲು ಪ್ರಯತ್ನಿಸುವಾಗ ಕೆಲವು ಪ್ರೇರಣೆಗಳು ಹೊಸದಾಗಿ ರೂಪುಗೊಳ್ಳುತ್ತವೆ. ಹೀಗೆ ಆರ್ಜಿತ ಪ್ರೇರಣೆಗಳ ಮೂಲ ಶಾರೀರಕ ಪ್ರೇರಣೆಗಳೇ ಆದರೂ ಅವು ಬರುಬರುತ್ತ ಕ್ರಿಯಾ ಸ್ವಾಯತ್ತತೆಯನ್ನು ಪಡೆಯುತ್ತವೆ. ಕೆಲವೊಮ್ಮೆ ಇವೇ ಅತಿಪ್ರಬಲವಾಗಿ ಮೂಲಪ್ರೇರಣೆಗಳು ಅಲಕ್ಷಿಸಲ್ಪಡುತ್ತವೆ. ಈ ಪ್ರೇರಣೆಗಳು ಒಮ್ಮೆ ರೂಪಗೊಂಡ ಅನಂತರ ಸಮಯ, ಸಂದರ್ಭ, ವ್ಯಕ್ತಿ, ಸಂಸ್ಕøತಿ ಇವುಗಳಿಗೆ ಅನುಗುಣವಾಗಿ ವ್ಯಕ್ತಿಯ ಮಾನಸಿಕ ಸಮತೋಲನವನ್ನು ಭಂಗಗೊಳಿಸಿ ಕಾರ್ಯೋನ್ಮುಖವಾಗುವಂತೆ ಮಾಡುತ್ತವೆ. ಮಾನವನ ಅನೇಕ ಉನ್ನತ ಸಾಧನೆಗಳು ಮತ್ತು ಆತನ ಅಧೋಗತಿಗಳ ಹಿನ್ನಲೆಯಲ್ಲಿ ಈ ಪ್ರೇರಣೆಗಳನ್ನು ಕಾಣಬಹುದು. ಈ ಆರ್ಜಿತ ಪ್ರೇರಣೆಗಳ ಪಟ್ಟಿಯನ್ನು ವರ್ಗೀಕರಣ ಮಾಡುವಾಗ ತಿಳಿಸಲಾಗಿದೆ. ಅವುಗಳಲ್ಲಿ ಕೆಲವು ಪ್ರೇರಣೆಗಳ ಕಾರ್ಯ ವಿಧಾನಗಳನ್ನು ಮಾತ್ರ ಇಲ್ಲಿ ಪರಿಚಯ ಮಾಡಿಕೊಡಲಾಗಿದೆ. 

	ಸಾಂಘಿಕ ಪ್ರೇರಣೆ: ಒಡನಾಡಿಗಳೆನಿಸಿರಬೇಕು, ಸಮೂಹದಲ್ಲಿರಬೇಕು, ಸಮಾಜದಲ್ಲಿರಬೇಕು ಎಂಬ ಆಂತರಿಕ ಬಯಕೆಯೆ ಸಾಂಘಿಕ ಪ್ರೇರಣೆಯ ಸಾಕ್ಷಿ. ಇದೊಂದು ಅತಿ ಪ್ರಬಲವಾದ ಪ್ರೇರಣೆಯಾದುದರಿಂದ, ಸಮಾಜದಿಂದ ದೂರ ಸರಿದಾಗ ವ್ಯಕ್ತಿ ನೀರಿನಿಂದ ಹೊರಬಂದ ಮೀನಿನಂತಾಗುತ್ತಾನೆ. ಸಮಾಜವಿಲ್ಲದೆ ಬದುಕು ದುಸ್ಸಾಧ್ಯವೆನಿಸುತ್ತದೆ. ಆದುದರಿಂದಲೆ ಸಮಾಜ ವಿಜ್ಞಾನಿಗಳು ಮಾನವ ಸಂಘಜೀವಿ ಎನ್ನುತ್ತಾರೆ. ಈ ಪ್ರೇರಣೆಯ ಫಲವೇ ಕುಟುಂಬ ಸಂಘಗಳು ಸಂಸ್ಥೆಗಳು ರಾಜ್ಯಗಳು ಇತ್ಯಾದಿಗಳು. ಸಂಘಜೀವಿ ಸಮಾಜದಲ್ಲಿ ಸುಖವಾಗಿ ಬಾಳಲೆಂದೇ ಕಟ್ಟುಕಟ್ಟಳೆಗಳನ್ನೂ ನೀತಿನಿಯಮಗಳನ್ನೂ ಸಂಪ್ರದಾಯಗಳನ್ನೂ ಧರ್ಮ ಸಂಸ್ಕøತಿ ಇತ್ಯಾದಿಗಳನ್ನೂ ರೂಪಿಸಿಕೊಂಡಿದ್ದಾನೆ. ಇಂಥ ಒಂದು ಪ್ರಬಲ ಪ್ರೇರಣೆ ಸಹಜ ಪ್ರವೃತ್ತಿ ಎಂಬ ಸಿದ್ಧಾಂತವಿತ್ತು. ಆದರೆ ಇತ್ತೀಚಿನ ಅಧ್ಯಯನಗಳಿಂದ ಇದು ಸಹಜ ಪ್ರವೃತ್ತಿಯಲ್ಲಿ, ಶಾರೀರಕ ಒಂದು ಆರ್ಜಿತ ಪ್ರೇರಣೆ ಎಂದು ತಿಳಿದು ಬಂದಿದೆ. ಇದರ ಮೂಲ ಉದ್ದೇಶ ತನ್ನ ದೈಹಿಕ ಅಗತ್ಯಗಳನ್ನು ಪೂರೈಸುವುದು ಮತ್ತು ತನ್ನನ್ನು ರಕ್ಷಿಸಿಕೊಳ್ಳುವುದೆ ಆಗಿರುತ್ತದೆ. ಇದರ ಮೂಲ ಎಳೆತನದ ಪರಾವಲಂಬಿತನದಲ್ಲಿ ಅಡಗಿರುವುದು ಕಂಡುಬರುತ್ತದೆ. ಎಂದರೇ ಶಿಶು ತನ್ನ ಅಗತ್ಯಗಳ ಪೂರೈಕೆಗಾಗಿ ತಾಯಿಯನ್ನು ಅವಲಂಬಿಸಿರುತ್ತದೆ. ತಾಯಿ ಶಿಶುವಿಗೆ ಹಾಲುಣಿಸುವಾಗ ಅದರ ಕೊಳಕನ್ನು ತೊಳೆದು ಬೆಚ್ಚಗೆ ಮಲಗಿಸುವಾಗ ಹೀಗೆ ಬಹಳ ಕಾಲ ಅದರೊಡನೆಯೆ ಇರುವುದರಿಂದ ಅನುಬಂಧನವೇರ್ಪಡುತ್ತದೆ. ತತ್‍ಫಲವಾಗಿ ಶಿಶುವಿಗೆ ಅಗತ್ಯಗಳ ಪೂರೈಕೆಯ ಜೊತೆಗೆ ಆಕೆ ಸಾಮೀಪ್ಯ ಸಹವಾಸ ಬೇಕೆನಿಸುತ್ತದೆ. ಕಾಲಕ್ರಮೇಣ ಈ ಅನುಬಂಧನ ಸಾಮಾನ್ಯೀಕರಣವಾಗಿ ವ್ಯಾಪಕವಾಗಿ ತಂದೆ ಒಡಹುಟ್ಟಿದವರು ನೆರೆಹೊರೆಯವರು ತನ್ನೊಡನಿರಬೇಕು ಅಥವಾ ತಾನು ಅವರೊಡನಿರಬೇಕು ಎಂದೆನಿಸುತ್ತದೆ. ಈ ಪ್ರೇರಣೆ ಅತಿ ಪ್ರಬಲವಾಗಿ ತನ್ನ ಮೂಲ ಅಗತ್ಯಗಳನ್ನು ಬಲಿಗೊಡುವಂತೆ ಮಾಡುತ್ತದೆ. ಆದುದರಿಂದಲೆ ವ್ಯಕ್ತಿ ಒಂಟಿಯಾದಾಗ ಮಾನಸಿಕ ಸಮತೋಲ ತಪ್ಪಿದಂತಾಗುತ್ತದೆ. ಅದನ್ನು ಹೋಗಲಾಡಿಸಿಕೊಳ್ಳಲೆಂದೇ ವ್ಯಕ್ತಿ ಸಂಗಡಿಗರನ್ನು ಹುಡುಕಿಕೊಂಡು ಹೋಗುತ್ತಾನೆ.

	ಮಾನ್ಯತೆ : ಇದೊಂದು ಅತಿ ಪ್ರಬಲವಾದ ಸಾಮಾಜಿಕ ಪ್ರೇರಣೆ. ಸಮಾಜ ತನ್ನನ್ನು ಮಾನ್ಯ ಮಾಡಬೇಕು ಇತರರು ತನ್ನ ಕಡೆ ಗಮನವೀಯಬೇಕು ತಾನು ಮಾಡಿದುದನ್ನು ಇತರರು ಅನುಮೋದಿಸಬೇಕು ಎಂಬ ಪ್ರಬಲವಾದ ಬಯಕೆಯೆ ಈ ಪ್ರೇರಣೆಗೆ ಸಾಕ್ಷಿ. ಈ ಪ್ರೇರಣೆಯ ಫಲವಾಗಿ ಜನರು ಹರಲಿರುಳು ಶ್ರಮಿಸಿ ದೊಡ್ಡ ವಿಜ್ಞಾನಿಗಳೊ ಕಲೆಗಾರರೊ ರಾಜಕಾರಣಿಗಳೊ ತ್ಯಾಗಿಗಳೊ ಸಮಾಜ ಸುಧಾರಕರೊ ಆಗಿರುತ್ತಾರೆ. ಸರ್ಕಾರಿ ಅಧಿಕಾರಿ ನ್ಯಾಯ ನಿಷ್ಠೆಗಳಿಂದ ನಡೆದುಕೊಳ್ಳಬಯಸುವುದು ಮಾನ್ಯತೆಗಾಗಿ. ವಿದ್ಯಾರ್ಥಿ ಹಗಲಿರುಳು ಓದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಬಯಸುವುದು ಮಾನ್ಯತೆಗಾಗಿ. ಮಕ್ಕಳು ಮನೆಯಲ್ಲಿ ಬಹಳ ಗಲಾಟೆ ಮಾಡುವುದು ಅಥವಾ ಬಹಳ ನಮ್ರತೆಯಿಂದ ನಡೆದುಕೊಳ್ಳುವುದು ತಂದೆತಾಯಿಗಳ ಗಮನವನ್ನು ತಮ್ಮೆಡೆಗೆ ಸೆಳೆಯುವುದಕ್ಕಾಗಿ. ಹೀಗೆ ಪ್ರತಿಯೊಬ್ಬ ಒಂದಲ್ಲ ಒಂದು ವಿಧದಲ್ಲಿ ಮಾನ್ಯತೆಯನ್ನು ಸಂಪಾದಿಸಲು ಸಮಾಜದ ಗಮನ ಸೆಳೆಯಲು ಪ್ರಯತ್ನಿಸುತ್ತಲೇ ಇರುತ್ತಾನೆ. ಅವನ್ನು ಪಡೆಯುವುದಕ್ಕಾಗಿಯೆ ಕೆಲವೊಮ್ಮೆ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಾಗುತ್ತಾನೆ. 

	ಈ ಪ್ರೇರಣೆಯ ಹಿನ್ನೆಲೆಯಲ್ಲಿ ಎಳೆತನದ ಶಾರೀರಕ ಅಗತ್ಯಗಳ ಪೂರೈಕೆ ಅಡಗಿರುವುದನ್ನು ಕಾಣಬಹುದು. ಶಿಶುವಿಗೆ ತಾಯಿ ಹಾಲುಣಿಸುವಾಗ ಅದನ್ನು ಮುದ್ದು ಮಾಡುವುದು ಅಪ್ಪಿಕೊಳ್ಳುವುದು ಮೃದುವಾಗಿ ಮಾತನಾಡಿಸುವುದು ಇತ್ಯಾದಿ ವರ್ತನೆಗಳನ್ನು ತೋರುವುದು ಸರಿಯಷ್ಟೆ. ಇವುಗಳಿಂದ ದೈಹಿಕ ತೃಪ್ತಿಯ ಜೊತೆಗೆ ಮಾನಸಿಕ ತೃಪ್ತಿಯೂ ಉಂಟಾಗುತ್ತದೆ. ಅದನ್ನು ಮತ್ತೆ ಮತ್ತೆ ಪಡೆಯುವುದಕ್ಕಾಗಿಯೇ ಆಕೆಯ ಗಮನವನ್ನು ಮಗು ತನ್ನೆಡೆಗೆ ಸೆಳೆಯಬಯಸುತ್ತದೆ. ಆಕೆಯಿಂದ ಮೆಚ್ಚುಗೆಯನ್ನು ಪಡೆಯಲು ಹಿತವಾದ ರೀತಿ ವರ್ತಿಸುತ್ತದೆ ಅಥವಾ ತುಂಟಾಟದಿಂದ ಆಕೆಯ ಗಮನವನ್ನು ಸೆಳೆಯುತ್ತದೆ. ಇದು ಮುಂದೆ ಸಾಮಾನ್ಯೀಕರಣವಾಗಿ ವ್ಯಕ್ತಿ ಸಮಾಜದಲ್ಲಿ ಮಾನ್ಯತೆಯನ್ನು ಬಯಸುತ್ತಾನೆ. ಶಾಲೆಯಲ್ಲಿ ವಿದ್ಯಾರ್ಥಿ ಉಪಾಧ್ಯಾಯರ ಗಮನ ಸೆಳೆಯಬಯಸುತ್ತಾನೆ. ಅಥವಾ ಮೆಚ್ಚುಗೆ ಪಡೆಯಲೆತ್ನಿಸುತ್ತಾನೆ. ಅದು ದೊರೆಯದೆ ಹೋದಾಗ ಅಸಂತುಷ್ಟನಾಗುತ್ತಾನೆ, ಆತನ ಸಮತೋಲ ತಪ್ಪುತ್ತದೆ. ಕೆಲವೊಮ್ಮೆ ಮನೋರೋಗಕ್ಕೂ ನಾಂದಿಯಾಗುತ್ತದೆ. ಈ ಪ್ರೇರಣಿ. 

	ಭದ್ರತಾ ಪ್ರೇರಣೆ : ಇತರರಿಗೆ ತಾನು ಬೇಕಾದವನು ಅವರು ತನ್ನನ್ನು ಆದರಿಸಬೇಕು ಹಿತರಕ್ಷಣೆ ಮಾಡಬೇಕು ತನ್ನನ್ನು ತ್ಯಜಿಸಬಾರದು ಬಹಿಷ್ಕಿರಿಸಬಾರದು ಎಂಬ ಹೆಬ್ಬಯಕೆಯೆ ಈ ಪ್ರೇರಣೆಗೆ ಸಾಕ್ಷಿ. ಈ ಪ್ರೇರಣೆಯ ತೃಪ್ತಿಗಾಗಿ ವ್ಯಕ್ತಿ ಸಮಾಜಾವಲಂಬಿಯಾಗುತ್ತಾನೆ. ಅದೊಪ್ಪುವ ರೀತಿಯಲ್ಲಿ ವರ್ತಿಸುತ್ತಾನೆ. ಅದರ ಕಟ್ಟಳೆಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾನೆ. ಹೀಗೆ ಸಮಾಜದ ಪ್ರೀತಿಗಾಗಿ ಒಪ್ಪಿಗೆಗಾಗಿ ತನನ್ನು ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಾಗುತ್ತಾನೆ. ಸಮಾಜ ತನ್ನನ್ನು ಬಹಿಷ್ಕರಿಸಿದಾಗ ಕಂಗಾಲಾಗುತ್ತಾನೆ ಉದ್ವಿಗ್ನನಾಗುತ್ತಾನೆ ಮಾನಸಿಕ ನೆಮ್ಮದಿ ನಾಶವಾಗಿ ಹುಚ್ಚನಂತಾಗುತ್ತಾನೆ. ಕೆಲವೊಮ್ಮೆ ಕೊರಗಿ ಮರಣವನ್ನಪ್ಪುವುದೂ ಉಂಟು. ಈ ಪ್ರೇರಣೆಯ ಫಲವಾಗಿಯೇ ವ್ಯಕ್ತಿ ಸಮಾಜಕ್ಕೆ ಹೊಂದಿಕೊಂಡು ಹೋಗುವುದು. ಮಾನ್ಯತೆ ಮತ್ತು ಭದ್ರತಾ ಪ್ರೇರಣೆಗಳ ಮೂಲ ಒಂದೇ ಆದರೂ ಇವೆರಡೂ ಪರಸ್ಪರ ವಿರುದ್ಧವಾದುವು. ಮಾನ್ಯತೆಯನ್ನು ಸಂಪಾದಿಸುವುದಕ್ಕಾಗಿ ವ್ಯಕ್ತಿ ತಾನು ಇತರರಂತಲ್ಲ, ತಾನೇ ಬೇರೆ ಎಂದು ತೋರಿಸಿಕೊಳ್ಳಬಯಸುತ್ತಾರೆ ಆದರೆ ಭದ್ರತಾ ಪ್ರೇರಣೆಯಲ್ಲಿ ವ್ಯಕ್ತಿ ತಾನು ಇತರರಿಗಿಂತ ಭಿನ್ನನಲ್ಲ ಎಂದು ತೋರಿಸಿಕೊಳ್ಳಲು ಭಯಪಡುತ್ತಾನೆ. ಎಲ್ಲರಂತೆ ನಾನೂ ಎಂದು ತೋರಿಸಿಕೊಳ್ಳಬಯಸುತ್ತಾನೆ. 

	ಹೀಗೆ ನಾವು ಅನೇಕ ಸಾಮಾಜಿಕ ಪ್ರೇರಣೆಗಳನ್ನೂ ಕಾಣಬಹುದು. ಈ ಪ್ರೇರಣೆಗಳು ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತವೆ.

	ಮೂಲಪ್ರೇರಣೆಗಳು ಜೀವಿಯನ್ನು ಕಾರ್ಯೋನ್ಮುಖನನ್ನಾಗಿ ಮಾಡುತ್ತವೆ ಎಂಬುದು ಪ್ರಾಣಿವರ್ಗಗಳಲ್ಲಿ ಅಕ್ಷರಸಹ ಸತ್ಯವಾದರೂ ಮಾನವ ಸಮಾಜದಲ್ಲಿ ಅವು ತಮ್ಮ ಶಕ್ತಿಯನ್ನು ಬಹಳಮಟ್ಟಿಗೆ ಕಳೆದುಕೊಂಡಿವೆ ಎನ್ನಬಹುದು. ಮೂಲ ಪ್ರೇರಣೆಗಳ ತೃಪ್ತಿಗಾಗಿ ಮನುಷ್ಯ ಅಗತ್ಯ ವಸ್ತುಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಅವನ್ನು ಒದಗಿಸಲು ಸಂಘಸಂಸ್ಥೆಗಳು ಯುಕ್ತ ವ್ಯವಸ್ಥೆ ಮಾಡಿವೆ. ಆದರೆ ಈ ಪ್ರೇರಕಶಕ್ತಿ ಮುಂಬರುವ ಕಷ್ಟ ಷರಿಸ್ಥಿತಿಗಳನ್ನು ಊಹಿಸಿ ಸಮಸ್ಯೆಗಳನ್ನು ಎದುರಿಸಲು ತಕ್ಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಚೋದಿಸುತ್ತವೆ. ಇಷ್ಟೇ ಅಲ್ಲದೆ ಇನ್ನೂ ಉತ್ತಮವಾದ ಮಾರ್ಗಗಳನ್ನು ಕಂಡುಹಿಡಿದು ಜನರಿಗೆ ದೈಹಿಕ ಸೌಖ್ಯವನ್ನು ಹೆಚ್ಚಿಸಲು ಕಾರಣವಾಗುತ್ತವೆ. ಹೀಗೆ ಸತತವಾಗಿ ಸೃಷ್ಟಿಸುತ್ತಿರುವ ಸಾಧನ ಸದುಪಾಯಗಳ ಸಮೂಹವೇ ನಾಗರಿಕತೆ. ಈ ಬಯಕೆ ಪೂರ್ಣವಾಗಲು ಶ್ರಮಿಸುವಂತೆ ಮಾನ್ಯತೆ ಸ್ಪರ್ಧೆ ಸಹಕಾರ ಮತ್ತಿತರ ಸಾಮಾಜಿಕ ಪ್ರೇರಣೆಗಳೂ ಸಮಾಜದಲ್ಲಿ ಹೊಂದಿಕೊಂಡು ಹೋಗುವಂತೆ ಸಾಂಘಿಕ ಪ್ರೇರಣೆ ಮತ್ತು ಭದ್ರತಾ ಪ್ರೇರಣೆಗಳೂ ಸಹಾಯ ಮಾಡುತ್ತವೆ.
(ಪಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ